ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಸಂಘರ್ಷ: ವಿಧಾನಸಭೆಯಲ್ಲಿ ಹೈಡ್ರಾಮ!
- sathyapathanewsplu
- 7 hours ago
- 1 min read

ನರೇಗಾ ಯೋಜನೆ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿರುವುದನ್ನು ವಿರೋಧಿಸಿ ರಾಜ್ಯ ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನವು, ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಸಂಘರ್ಷಕ್ಕೆ ವೇದಿಕೆಯಾಯಿತು. ಬುಧವಾರ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಲು ಆಗಮಿಸಿದ ರಾಜ್ಯಪಾಲ ಥಾವರ್‌ಚಂದ್ರ ಗೆಹ್ಲೋಟ್ ಅವರು, ಸರ್ಕಾರ ಸಿದ್ಧಪಡಿಸಿದ್ದ ಭಾಷಣದ ಪ್ರತಿಯನ್ನು ಓದದೆ ಕೇವಲ ಒಂದೆರಡು ವಾಕ್ಯಗಳಲ್ಲಿ ಶುಭಾಶಯ ತಿಳಿಸಿ ನಿರ್ಗಮಿಸಿದರು. ಸರ್ಕಾರದ ಭಾಷಣದಲ್ಲಿದ್ದ 11 ಅಂಶಗಳನ್ನು ತೆಗೆದುಹಾಕುವಂತೆ ರಾಜ್ಯಪಾಲರು ನೀಡಿದ್ದ ಸೂಚನೆಯನ್ನು ಸರ್ಕಾರ ನಿರಾಕರಿಸಿದ್ದೇ ಈ ಬಿಕ್ಕಟ್ಟಿಗೆ ಕಾರಣ ಎನ್ನಲಾಗಿದೆ.
ರಾಜ್ಯಪಾಲರು ಭಾಷಣ ಮಾಡದೆ ಅರ್ಧಕ್ಕೇ ನಿರ್ಗಮಿಸಲು ಮುಂದಾದಾಗ ಆಡಳಿತ ಪಕ್ಷದ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ ರಾಜ್ಯಪಾಲರನ್ನು ತಡೆಯಲು ಮುಂದಾದ ಪ್ರಸಂಗವೂ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದ್ದರಿಂದ ಸದನದಲ್ಲಿ ಕೆಲಕಾಲ ಹೈಡ್ರಾಮ ಸೃಷ್ಟಿಯಾಯಿತು. ಒಂದು ವೇಳೆ ರಾಜ್ಯಪಾಲರು ಅಧಿವೇಶನಕ್ಕೆ ಬರದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿತ್ತು.
ರಾಜ್ಯಪಾಲರು ಸದನದಿಂದ ಹೊರಬಂದು ಕಾರು ಹತ್ತುತ್ತಿದ್ದಂತೆಯೇ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಸೇರಿದಂತೆ ಹಲವು ನಾಯಕರು ‘ಸಂವಿಧಾನ ಧಿಕ್ಕರಿಸಿದ ರಾಜ್ಯಪಾಲರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಸ್ಪೀಕರ್ ಯು.ಟಿ. ಖಾದರ್ ಮತ್ತು ಸಿಎಂ ಸಿದ್ದರಾಮಯ್ಯ ರಾಜ್ಯಪಾಲರನ್ನು ಬೀಳ್ಕೊಟ್ಟರು. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರು ಮತ್ತು ಆಡಳಿತ ಪಕ್ಷದ ನಡುವಿನ ಈ ನೇರ ಸಂಘರ್ಷ ಈಗ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.





Comments