ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪುತ್ರಿಯ ಅದ್ಧೂರಿ ವಿವಾಹ: ಸೋದರನ ಮಗನನ್ನೇ ಅಳಿಯನನ್ನಾಗಿ ಮಾಡಿಕೊಂಡ ಜನರಲ್!
- sathyapathanewsplu
- Jan 1
- 1 min read

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ತಮ್ಮ ಮೂರನೇ ಪುತ್ರಿ ಮದ್ದೂರ್ ಅವರನ್ನು ತಮ್ಮದೇ ಸೋದರ ಕಾಸಿಮ್ ಮುನೀರ್ ಅವರ ಪುತ್ರ ಅಬ್ದುಲ್ ರೆಹಮಾನ್ ಜೊತೆ ವಿವಾಹ ಮಾಡಿಕೊಟ್ಟಿದ್ದಾರೆ. ಈ ಮೂಲಕ ಮುನೀರ್ ಅವರು ತಮ್ಮ ಅಣ್ಣನ ಮಗನನ್ನೇ ಅಳಿಯನನ್ನಾಗಿ ಸ್ವೀಕರಿಸಿದ್ದಾರೆ. ಡಿಸೆಂಬರ್ 26 ರಂದು ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯಲ್ಲಿ (GHQ) ಈ ವಿವಾಹ ಮಹೋತ್ಸವವು ಅತ್ಯಂತ ಅದ್ಧೂರಿಯಾಗಿ ನೆರವೇರಿದೆ. ಜನರಲ್ ಮುನೀರ್ ಅವರಿಗೆ ಒಟ್ಟು ನಾಲ್ಕು ಹೆಣ್ಣು ಮಕ್ಕಳಿದ್ದು, ಇದು ಅವರ ಮೂರನೇ ಮಗಳ ವಿವಾಹವಾಗಿದೆ.
ಸೇನಾ ಪ್ರಧಾನ ಕಚೇರಿಯಲ್ಲಿ ನಡೆದ ಈ ಹೈ-ಪ್ರೊಫೈಲ್ ಮದುವೆ ಸಮಾರಂಭದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಉಪಪ್ರಧಾನಿ ಇಶಾಕ್ ದಾರ್ ಮತ್ತು ಐಎಸ್ಐ (ISI) ಮುಖ್ಯಸ್ಥರ ಸೇರಿದಂತೆ ದೇಶದ ಪ್ರಮುಖ ರಾಜಕೀಯ ನಾಯಕರು ಹಾಗೂ ನಿವೃತ್ತ ಸೇನಾ ಅಧಿಕಾರಿಗಳು ಭಾಗವಹಿಸಿದ್ದರು. ಅಂದಾಜು 400 ಗಣ್ಯ ಅತಿಥಿಗಳು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಅಳಿಯ ಅಬ್ದುಲ್ ರೆಹಮಾನ್ ಈ ಹಿಂದೆ ಪಾಕಿಸ್ತಾನ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದು, ಸದ್ಯ ಸೇನಾ ಕೋಟಾದಡಿ ನಾಗರಿಕ ಸೇವೆಗೆ ಸೇರಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಷ್ಟು ದೊಡ್ಡ ಮಟ್ಟದ ವಿವಾಹ ಸಮಾರಂಭ ನಡೆದಿದ್ದರೂ, ಭದ್ರತಾ ಕಾರಣಗಳಿಂದಾಗಿ ಮದುವೆಯ ಯಾವುದೇ ಫೋಟೋ ಅಥವಾ ವಿಡಿಯೋಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿಲ್ಲ. ಪಾಕಿಸ್ತಾನದ ಪತ್ರಕರ್ತ ಜಾಹಿದ್ ಗಿಸ್ಕೋರಿ ಅವರ ವರದಿಯ ಪ್ರಕಾರ, ಕಟ್ಟುನಿಟ್ಟಿನ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅತಿಥಿಗಳಿಗೆ ಮತ್ತು ಸಮಾರಂಭದ ಮಾಹಿತಿಗೆ ನಿರ್ಬಂಧ ಹೇರಲಾಗಿತ್ತು. ಅತ್ಯಂತ ಬಿಗಿ ಭದ್ರತೆಯ ನಡುವೆ ಪಾಕಿಸ್ತಾನದ ಅಧಿಕಾರ ವರ್ಗದ ಪ್ರಮುಖರ ಸಮ್ಮುಖದಲ್ಲಿ ಈ ವೈವಾಹಿಕ ಕಾರ್ಯಕ್ರಮ ಸುಸೂತ್ರವಾಗಿ ಜರುಗಿದೆ.





Comments