ಗೃಹಲಕ್ಷ್ಮಿ ಯೋಜನೆ: ಬಾಕಿ ಇರುವ ಎರಡು ತಿಂಗಳ ಹಣ ಶೀಘ್ರವೇ ಜಮಾ - ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ
- sathyapathanewsplu
- Jan 9
- 1 min read

ಬೆಂಗಳೂರು: ರಾಜ್ಯದ ಮಹಿಳೆಯರ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಹಣವನ್ನು ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಹಣಕಾಸು ಇಲಾಖೆಯಿಂದ ಅನುಮತಿ ಸಿಕ್ಕ ತಕ್ಷಣವೇ ನೇರ ನಗದು ವರ್ಗಾವಣೆ (DBT) ಮೂಲಕ ಹಣ ಬಿಡುಗಡೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಅನರ್ಹ ಪಡಿತರ ಚೀಟಿಗಳ ರದ್ದತಿಯಿಂದಾಗಿ ಕೆಲವು ಫಲಾನುಭವಿಗಳಿಗೆ ಹಣ ಸಂದಾಯವಾಗುವುದು ವಿಳಂಬವಾಗಿದೆ. ಆಹಾರ ಇಲಾಖೆಯಿಂದ ಪರಿಷ್ಕೃತ ದತ್ತಾಂಶ (Data) ಬಂದ ತಕ್ಷಣ, ಅರ್ಹರಿರುವ ಎಲ್ಲರಿಗೂ ಬಾಕಿ ಹಣ ತಲುಪಲಿದೆ. ಒಂದು ವೇಳೆ ರೇಷನ್ ಕಾರ್ಡ್ ರದ್ದಾಗಿದ್ದರೂ, ಫಲಾನುಭವಿಗಳು ತೆರಿಗೆ ಪಾವತಿದಾರರಲ್ಲದಿದ್ದರೆ ಅಂತಹವರಿಗೆ ಯೋಜನೆಯ ಸೌಲಭ್ಯ ಮುಂದುವರಿಯಲಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಇದೇ ವೇಳೆ 'ಗೃಹಲಕ್ಷ್ಮಿ ಸಹಕಾರ ಸಂಘ' ಮತ್ತು 'ಅಕ್ಕ ಪಡೆ' ಎಂಬ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಸಚಿವರು, ಸಂಘದ ಸದಸ್ಯರಾದವರು ಪ್ರತಿ ತಿಂಗಳು 200 ರೂಪಾಯಿ ಉಳಿತಾಯ ಮಾಡಬೇಕು ಎಂದು ತಿಳಿಸಿದರು. ಆರು ತಿಂಗಳ ನಂತರ ಸದಸ್ಯರು ಸುಲಭವಾಗಿ ಸಾಲ ಸೌಲಭ್ಯ ಪಡೆಯಲು ಅರ್ಹರಾಗಲಿದ್ದು, ಇದರೊಂದಿಗೆ ಮಹಿಳೆಯರಿಗೆ ಆರೋಗ್ಯ ವಿಮೆ ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅವರು ಹೇಳಿದರು.





Comments