ಚಾರ್ಮಾಡಿ ಘಾಟಿಯ ಮಲಯ ಮಾರುತ ಅರಣ್ಯದಲ್ಲಿ ಭೀಕರ ಕಾಡ್ಗಿಚ್ಚು: ವನ್ಯಸಂಪತ್ತು ಭಸ್ಮ!
- sathyapathanewsplu
- 3 days ago
- 1 min read

ಮೂಡಿಗೆರೆ: ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಚಾರ್ಮಾಡಿ ಘಾಟ್ ವ್ಯಾಪ್ತಿಯ ಮಲಯ ಮಾರುತ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಹಸಿರು ಸಿರಿ ನಾಶವಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 2 ಕಿಲೋಮೀಟರ್ ದೂರದ ಅರಣ್ಯದ ಒಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಕ್ಷಣಕ್ಕೂ ಭೀಕರವಾಗಿ ವ್ಯಾಪಿಸುತ್ತಿದೆ. ಇದರಿಂದಾಗಿ ಮಲೆನಾಡಿನ ಜೀವವೈವಿಧ್ಯಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದಿದ್ದು, ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.
ಬೆಂಕಿಯ ಕೆನ್ನಾಲಗೆ ದಟ್ಟವಾಗಿ ಆವರಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಡಿದಾದ ಗುಡ್ಡಗಾಡು ಪ್ರದೇಶವಾದ್ದರಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗಿವೆ. ಸುಡು ಬಿಸಿಲು ಮತ್ತು ಗಾಳಿಯ ವೇಗ ಹೆಚ್ಚಾಗಿರುವುದರಿಂದ ಬೆಂಕಿಯನ್ನು ಹತೋಟಿಗೆ ತರಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆಧುನಿಕ ಉಪಕರಣಗಳ ಜೊತೆಗೆ ಸ್ಥಳೀಯರ ನೆರವನ್ನೂ ಪಡೆದು ಅರಣ್ಯ ರಕ್ಷಕರು ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ.
ಈ ಭೀಕರ ಅಗ್ನಿ ಅವಘಡದಿಂದಾಗಿ ಅರಣ್ಯದಲ್ಲಿದ್ದ ಅಪರೂಪದ ಗಿಡಮೂಲಿಕೆಗಳು, ಸಣ್ಣಪುಟ್ಟ ಪ್ರಾಣಿ-ಪಕ್ಷಿಗಳು ಹಾಗೂ ಅಮೂಲ್ಯವಾದ ಮರಮಟ್ಟುಗಳು ಅಗ್ನಿಗೆ ಆಹುತಿಯಾಗಿವೆ ಎಂದು ಅಂದಾಜಿಸಲಾಗಿದೆ. ಕಾಡ್ಗಿಚ್ಚು ಹರಡಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆಯೇ ಅಥವಾ ಕಿಡಿಗೇಡಿಗಳ ಕೃತ್ಯವೇ ಎಂಬ ಬಗ್ಗೆ ಅರಣ್ಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬೆಂಕಿ ಮತ್ತಷ್ಟು ವ್ಯಾಪಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಘಾಟ್ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.





Comments