ಬೀದಿನಾಯಿ ದಾಳಿಗೆ ಬಲಿಯಾದ 10 ವರ್ಷದ ಬಾಲಕಿ: ಚಿಕಿತ್ಸೆ ಫಲಿಸದೇ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಸಾವು
- sathyapathanewsplu
- Jan 15
- 1 min read

ಬಾಗಲಕೋಟೆ: ಜಿಲ್ಲೆಯ ನವನಗರದಲ್ಲಿ ಬೀದಿನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ 10 ವರ್ಷದ ಬಾಲಕಿ ಅಲೈನಾ ಲೋಕಾಪುರ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಕಳೆದ ಕೆಲವು ದಿನಗಳಿಂದ ಸಾವಿನೊಂದಿಗೆ ಹೋರಾಡುತ್ತಿದ್ದ ಬಾಲಕಿ, ಅಂತಿಮವಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಈ ಘಟನೆಯಿಂದ ಬಾಲಕಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯರಲ್ಲಿ ಶೋಕ ಮಡುಗಟ್ಟಿದೆ.
ಕಳೆದ ಡಿಸೆಂಬರ್ 27 ರಂದು ನವನಗರದ ಸೆಕ್ಟರ್ ನಂಬರ್ 15 ರಲ್ಲಿ ಅಲೈನಾ ಮೇಲೆ ಬೀದಿನಾಯಿಗಳು ಭೀಕರವಾಗಿ ದಾಳಿ ನಡೆಸಿದ್ದವು. ಈ ವೇಳೆ ನಾಯಿಗಳು ಬಾಲಕಿಯ ಕಣ್ಣು, ಮೂಗು ಹಾಗೂ ಮುಖದ ಭಾಗಕ್ಕೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿದ್ದವು. ತಕ್ಷಣವೇ ಆಕೆಯನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗಾಯಗಳು ಗಂಭೀರವಾಗಿದ್ದರಿಂದ ಮತ್ತು ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ದುರದೃಷ್ಟವಶಾತ್, ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಬಾಲಕಿಯ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಈ ಘಟನೆಯು ನಗರದಲ್ಲಿ ಬೀದಿನಾಯಿಗಳ ಹಾವಳಿ ಎಷ್ಟರ ಮಟ್ಟಿಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಬೀದಿನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಆಕ್ರೋಶದೊಂದಿಗೆ ಒತ್ತಾಯಿಸಿದ್ದಾರೆ.





Comments