ಇರಾನ್‌ನಲ್ಲಿ ಭುಗಿಲೆದ್ದ ಆಕ್ರೋಶ: 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ, 650 ಸಾವು
- sathyapathanewsplu
- Jan 13
- 1 min read

ಟೆಹ್ರಾನ್: ಇರಾನ್‌ನಲ್ಲಿ ಮುಲ್ಲಾ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಈಗ ಹಿಂಸಾತ್ಮಕ ರೂಪ ಪಡೆದಿದೆ. ಆರ್ಥಿಕ ಮುಗ್ಗಟ್ಟು, ವಿಪರೀತ ಬೆಲೆ ಏರಿಕೆ ಮತ್ತು ಕಟ್ಟುನಿಟ್ಟಿನ ಧಾರ್ಮಿಕ ನಿಯಮಗಳ ವಿರುದ್ಧ ಆರಂಭವಾದ ಈ ಹೋರಾಟವು ಇಡೀ ದೇಶವನ್ನು ವ್ಯಾಪಿಸಿದೆ. ಪ್ರತಿಭಟನಾಕಾರರು ಆಡಳಿತದ ಸಂಕೇತವೆಂದು ಪರಿಗಣಿಸಲಾದ ಸುಮಾರು 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ ಹಚ್ಚಿದ್ದು, ಪರಿಸ್ಥಿತಿ ಕೈಮೀರುತ್ತಿದೆ. ಇರಾನ್‌ನ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಈ ಆಡಳಿತ ವಿರೋಧಿ ದಂಗೆಯಲ್ಲಿ ಈವರೆಗೆ 650ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವಿದೇಶಾಂಗ ಸಚಿವ ಅರಘ್ಚಿ ಅವರು ಮಸೀದಿಗಳ ಮೇಲಿನ ದಾಳಿಯನ್ನು ದೃಢಪಡಿಸಿದ್ದು, ಇದು ಅತ್ಯಂತ ಆಘಾತಕಾರಿ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ರಾಜಧಾನಿ ಟೆಹ್ರಾನ್ ಸೇರಿದಂತೆ ದೇಶದ 31 ಪ್ರಾಂತ್ಯಗಳ 100ಕ್ಕೂ ಹೆಚ್ಚು ನಗರಗಳಲ್ಲಿ ಪ್ರತಿಭಟನೆ ಕಿಚ್ಚು ಹಬ್ಬಿದೆ. ಆಯತೊಲ್ಲಾ ಖಮೇನಿ ನೇತೃತ್ವದ ಸರ್ಕಾರವು ಪ್ರತಿಭಟನೆ ಹತ್ತಿಕ್ಕಲು ಇಂಟರ್ನೆಟ್ ಸ್ಥಗಿತ ಹಾಗೂ ವಿದ್ಯುತ್ ಕಡಿತದಂತಹ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ, ಜನರು ಬೀದಿಗಿಳಿಯುವುದನ್ನು ನಿಲ್ಲಿಸಿಲ್ಲ. ಟೆಹ್ರಾನ್‌ನ ಪ್ರಮುಖ ವ್ಯಾಪಾರ ಕೇಂದ್ರಗಳು ಮುಚ್ಚಲ್ಪಟ್ಟಿದ್ದು, "ಮುಲ್ಲಾಗಳೇ ದೇಶ ಬಿಟ್ಟು ತೊಲಗಿ" ಎಂಬ ಘೋಷಣೆಗಳು ಮೊಳಗುತ್ತಿವೆ.
ಇಸ್ಲಾಮಿಕ್ ಗಣರಾಜ್ಯದ 47 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಡಳಿತ ಪತನದ ಭೀತಿ ಎದುರಾಗಿದೆ. ಇತ್ತೀಚೆಗೆ ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ನಡೆದ ರಾಜಕೀಯ ಬದಲಾವಣೆಗಳಂತೆ ಇರಾನ್‌ನಲ್ಲೂ ಸದ್ಯದಲ್ಲೇ ಸರ್ಕಾರ ಪತನಗೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಜಾಗತಿಕ ಮಟ್ಟದಲ್ಲಿ ಶುರುವಾಗಿವೆ. ಒಂದು ವೇಳೆ ಹೋರಾಟಗಾರರು ಮೇಲುಗೈ ಸಾಧಿಸಿದರೆ, ಪರಮೋಚ್ಚ ನಾಯಕ ಖಮೇನಿ ಅವರು ರಷ್ಯಾಗೆ ಪಲಾಯನ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂಬ ವರದಿಗಳು ಕೂಡ ಕೇಳಿಬರುತ್ತಿವೆ.





Comments