ಆಭರಣ ಅಂಗಡಿಗಳಲ್ಲಿ ಬುರ್ಖಾ, ಹೆಲ್ಮೆಟ್ ಧರಿಸಿದವರಿಗೆ ಪ್ರವೇಶ ನಿರಾಕರಣೆ: ಬಿಹಾರದ ಜುವೆಲ್ಲರ್ಸ್ ಸಂಘದ ಹೊಸ ನಿಯಮ
- sathyapathanewsplu
- Jan 9
- 1 min read

ಪಾಟ್ನಾ: ಇತ್ತೀಚಿನ ದಿನಗಳಲ್ಲಿ ಆಭರಣ ಅಂಗಡಿಗಳಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬಿಹಾರದಾದ್ಯಂತ ಇರುವ ಜುವೆಲ್ಲರಿ ಮಳಿಗೆಗಳಲ್ಲಿ ಮುಖ ಮುಚ್ಚುವ ಯಾವುದೇ ರೀತಿಯ ವಸ್ತ್ರ ಅಥವಾ ಸಾಧನಗಳನ್ನು ಧರಿಸಿದವರಿಗೆ ಪ್ರವೇಶ ನಿರಾಕರಿಸಲಾಗಿದೆ. ಜನವರಿ 8ರಿಂದ ಜಾರಿಗೆ ಬಂದಿರುವ ಈ ಹೊಸ ನಿಯಮದ ಅನ್ವಯ, ಗ್ರಾಹಕರು ಹಿಜಾಬ್, ನಿಖಾಬ್, ಬುರ್ಖಾ, ಮಾಸ್ಕ್ ಅಥವಾ ಹೆಲ್ಮೆಟ್ ಧರಿಸಿ ಅಂಗಡಿಯೊಳಗೆ ಬರುವಂತಿಲ್ಲ. ಅಖಿಲ ಭಾರತ ಜುವೆಲ್ಲರ್ಸ್ ಮತ್ತು ಗೋಲ್ಡ್ ಫೆಡರೇಷನ್ ನೀಡಿದ ನಿರ್ದೇಶನದ ಮೇರೆಗೆ ಈ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ.
ದರೋಡೆಕೋರರು ಗ್ರಾಹಕರ ಸೋಗಿನಲ್ಲಿ ಮುಖ ಮುಚ್ಚಿಕೊಂಡು ಬಂದು ಹಾಡಹಗಲೇ ದರೋಡೆ ಎಸಗುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳಿದ್ದರೂ ಮುಖ ಸರಿಯಾಗಿ ಕಾಣಿಸದ ಕಾರಣ ಆರೋಪಿಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ಮತ್ತು ಅಂಗಡಿ ಮಾಲೀಕರಿಗೆ ಸವಾಲಾಗಿ ಪರಿಣಮಿಸಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಗನಕ್ಕೇರುತ್ತಿರುವ ಈ ಸಮಯದಲ್ಲಿ ವ್ಯಾಪಾರಿಗಳ ಸುರಕ್ಷತೆ ಬಹಳ ಮುಖ್ಯವಾಗಿದ್ದು, ಗುರುತು ಪತ್ತೆಹಚ್ಚಲು ಅಡ್ಡಿಯಾಗುವ ಯಾವುದೇ ವಸ್ತ್ರಗಳಿಗೆ ಈ ನಿರ್ಬಂಧ ಹೇರಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ನಿರ್ಧಾರವು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಸಮುದಾಯದ ವಿರುದ್ಧದ ಕ್ರಮವಲ್ಲ, ಬದಲಾಗಿ ಇದು ಸಂಪೂರ್ಣವಾಗಿ ಭದ್ರತೆಯ ದೃಷ್ಟಿಯಿಂದ ಕೈಗೊಂಡ ತೀರ್ಮಾನವಾಗಿದೆ ಎಂದು ಆಭರಣ ವ್ಯಾಪಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ನಿಯಮವು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯಿಸುತ್ತದೆ. ಗ್ರಾಹಕರು ಅಂಗಡಿಯೊಳಗೆ ಬರುವಾಗ ಮಾಸ್ಕ್ ಅಥವಾ ಮುಖ ಮುಚ್ಚಿರುವ ಬಟ್ಟೆಯನ್ನು ತೆಗೆದು ತಮ್ಮ ಗುರುತನ್ನು ಸ್ಪಷ್ಟಪಡಿಸಿದ ನಂತರವಷ್ಟೇ ಅವರಿಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು ಎಂದು ಮಾಲೀಕರು ತಿಳಿಸಿದ್ದು, ಈಗಾಗಲೇ ಪಾಟ್ನಾ ಸೇರಿದಂತೆ ಬಿಹಾರದಾದ್ಯಂತ ಹಲವು ಅಂಗಡಿಗಳ ಮುಂದೆ ಈ ಬಗ್ಗೆ ಸೂಚನಾ ಫಲಕಗಳನ್ನು ಹಾಕಲಾಗಿದೆ.





Comments