ಬಸ್ ನಿಲ್ಲಿಸದ ವಿಚಾರಕ್ಕೆ ಗಲಾಟೆ: ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ — ಇಬ್ಬರ ಬಂಧನ
- sathyapathanewsplu
- Jan 7
- 1 min read

ಬಸ್ ನಿಲ್ಲಿಸದಿದ್ದಕ್ಕೆ ಸಿಟ್ಟುಗೊಂಡ ಗ್ರಾಮಸ್ಥರು ಬಸ್‌ನ್ನು ಅಡ್ಡಗಟ್ಟಿ ಗಲಾಟೆ ನಡೆಸಿ, ಕರ್ತವ್ಯದಲ್ಲಿದ್ದ ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ಶಾಲಾ ಮಕ್ಕಳು ಬಸ್‌ಗಾಗಿ ಕಾಯುತ್ತಿದ್ದರು. ಆದರೆ ಬಸ್ ನಿಲ್ಲಿಸದೇ ಮುಂದೆ ಸಾಗಿದ ಕಾರಣ, ಮಕ್ಕಳಿಗೆ ಪರೀಕ್ಷೆ ತಪ್ಪುತ್ತದೆ ಎಂಬ ಆತಂಕದಲ್ಲಿ ಬಾಲಕಿಯ ಪೋಷಕರು ಬೈಕ್‌ನಲ್ಲಿ ಬಸ್‌ನ್ನು ಬೆನ್ನಟ್ಟಿ ಟೋಲ್ ನಾಕಾ ಬಳಿ ಅಡ್ಡಗಟ್ಟಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಬಸ್ ಹತ್ತಲು ಮುಂದಾದಾಗ, ಪರಿಶೀಲನೆ ವೇಳೆ ಸಮಸ್ಯೆಯಾಗಬಹುದು ಎಂಬ ಕಾರಣ ನೀಡಿ ಕಂಡಕ್ಟರ್ ನೇತ್ರಾವತಿ ಬಸ್ ಹತ್ತಬಾರದು ಎಂದು ಸೂಚಿಸಿ ವಿದ್ಯಾರ್ಥಿನಿಯನ್ನು ಕೆಳಗೆ ಇಳಿಸಿದ್ದಾರೆ ಎನ್ನಲಾಗಿದೆ.
ಈ ವಿಷಯ ತಿಳಿದ ಬಾಲಕಿಯ ತಂದೆ ಹಾಗೂ ಗ್ರಾಮಸ್ಥರು ಕೋಪಗೊಂಡು ಬಸ್‌ನ್ನು ಅಡ್ಡಗಟ್ಟಿ, ಯಾಕೆ ವಿದ್ಯಾರ್ಥಿನಿಯನ್ನು ಕೆಳಗೆ ಇಳಿಸಿದ್ದೀರಿ ಎಂದು ಮುಂಡರಗಿ ತಾಲ್ಲೂಕು ಕದಂಪೂರ ಗ್ರಾಮದ ಪ್ರಕಾಶ ಸಂಕಣ್ಣನವರ ಪ್ರಶ್ನಿಸಿದ್ದಾರೆ. ಮಾತಿನ ಚಕಮಕಿ ಗಲಾಟೆಗೆ ತಿರುಗಿದ್ದು, ಗ್ರಾಮಸ್ಥರು ಚಾಲಕ ಹಾಗೂ ನಿರ್ವಾಹಕಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಅದೇ ಗ್ರಾಮದ ನೀಲಪ್ಪ ಜಂತ್ರಿ ಏಕಾಏಕಿ ಕಂಡಕ್ಟರ್ ನೇತ್ರಾವತಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಇದರಿಂದ ಸಿಟ್ಟುಗೊಂಡ ನೇತ್ರಾವತಿ ಪ್ರತಿರೋಧ ವ್ಯಕ್ತಪಡಿಸಿದ್ದು, ನಂತರ ಜೋರಾಗಿ ಅಳುತ್ತಾ ಕುಸಿದುಬಿದ್ದಿದ್ದಾರೆ. ಕೂಡಲೇ ಪ್ರಯಾಣಿಕರು ಅವರನ್ನು ಎತ್ತಿ ಸೀಟಿನಲ್ಲಿ ಕೂರಿಸಿ ಪ್ರಾಥಮಿಕ ಆರೈಕೆ ಒದಗಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನೇತ್ರಾವತಿ ಅವರು ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪ್ರಕಾಶ ಸಂಕಣ್ಣನವರ ಹಾಗೂ ಹಲ್ಲೆ ನಡೆಸಿದ ನೀಲಪ್ಪ ಜಂತ್ರಿಯನ್ನು ಪೊಲೀಸರು ಬಂಧಿಸಿದ್ದು, ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿ ಪ್ರಕರಣಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





Comments