ಹೊಸಕೋಟೆ: ಚೀಟಿ ವಿವಾದ – ಸಹೋದರನ ಮನೆಗೆ ಬೆಂಕಿ ಹಚ್ಚಲು ಹೋಗಿ ತಾನೇ ಸುಟ್ಟ ಆರೋಪಿ
- sathyapathanewsplu
- Jan 7
- 1 min read

ಚೀಟಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ ವ್ಯಕ್ತಿಯೋರ್ವ, ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಸಹೋದರನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ವೇಳೆ ತಾನೇ ಗಂಭೀರವಾಗಿ ಸುಟ್ಟುಕೊಂಡ ಘಟನೆ ಹೊಸಕೋಟೆ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ಗಾಯಗೊಂಡ ವ್ಯಕ್ತಿಯನ್ನು ಮುನಿರಾಜು ಎಂದು ಗುರುತಿಸಲಾಗಿದ್ದು, ಆತ ಸಹೋದರ ರಾಮಕೃಷ್ಣನ ಮನೆಯನ್ನೇ ಸುಡಲು ಸಂಚು ರೂಪಿಸಿದ್ದಾನೆ ಎನ್ನಲಾಗಿದೆ. ಬೆಂಕಿ ಹಚ್ಚುವ ವೇಳೆ ಕೈಯಲ್ಲಿದ್ದ ಪೆಟ್ರೋಲ್ ಡಬ್ಬದಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡು ಮುನಿರಾಜುವೇ ಸುಟ್ಟುಕೊಂಡಿದ್ದಾನೆ. “ಕಾಪಾಡಿ, ಕಾಪಾಡಿ” ಎಂದು ಕಿರುಚಿದ ಶಬ್ದ ಕೇಳಿ ಸ್ಥಳೀಯರು ತಕ್ಷಣ ಧಾವಿಸಿ ಅವನನ್ನು ರಕ್ಷಿಸಿದ್ದಾರೆ.
ಚೀಟಿ ವ್ಯವಹಾರವೇ ಸಂಘರ್ಷಕ್ಕೆ ಕಾರಣ
ಮುನಿರಾಜು ಕಳೆದ ಎಂಟು ವರ್ಷಗಳಿಂದ ಗ್ರಾಮದಲ್ಲಿ ಪಟಾಕಿ ಚೀಟಿ ನಡೆಸುತ್ತಿದ್ದು, ಅದರಲ್ಲಿ ಭಾರೀ ನಷ್ಟ ಅನುಭವಿಸಿದ್ದಾನೆ. ಚೀಟಿದಾರರು ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದರಿಂದ ಕುಟುಂಬಸ್ಥರು ಸ್ವಲ್ಪ ಜಮೀನು ಮಾರಾಟ ಮಾಡಿ ಹಣ ನೀಡಿದ್ದರು. ಆದರೂ ಅದು ಸಾಕಾಗದೇ ಉಳಿದ ಜಮೀನು ಮಾರಾಟ ಮಾಡುವಂತೆ ಆತ ಸಹೋದರನ ಮೇಲೆ ಒತ್ತಡ ಹೇರಿದ್ದಾನೆ. ಇದಕ್ಕೆ ರಾಮಕೃಷ್ಣ ನಿರಾಕರಿಸಿದ ಹಿನ್ನೆಲೆ, ಆತನ ಕುಟುಂಬವನ್ನೇ ಮುಗಿಸುವ ಉದ್ದೇಶದಿಂದ ಮನೆಗೆ ಬೆಂಕಿ ಹಚ್ಚಲು ಮುನಿರಾಜು ಯತ್ನಿಸಿದ್ದಾನೆ ಎನ್ನಲಾಗಿದೆ.
ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಘಟನೆಯ ಸಂಪೂರ್ಣ ದೃಶ್ಯ ಸಹೋದರನ ಮನೆಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಅದರಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ವೇಳೆ ಆರೋಪಿ ತಾನೇ ಸುಟ್ಟಿರುವುದು ಕಾಣಿಸಿದೆ. ಗಂಭೀರ ಗಾಯಗೊಂಡ ಮುನಿರಾಜುವನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.





Comments